ಕುಡಿಮಿಯಾ ಮಲೈ

ತಮಿಳುನಾಡಿನ ತಿರುಚ್ಚಿರಪ್ಪಳ್ಳಿ ಜಿಲ್ಲೆಯಲ್ಲಿರುವ ಒಂದು ಬೆಟ್ಟ; ಆ ಬೆಟ್ಟಕ್ಕೆ ಹೊಂದಿಕೊಂಡಿರುವ ಅದೇ ಹೆಸರಿನ ಗ್ರಾಮ. ಪ್ರಾಚೀನ ಇತಿಹಾಸವುಳ್ಳ ಈ ಗ್ರಾಮ ಹಿಂದೆ ಪುದುಕೋಟೆ ಸಂಸ್ಥಾನಕ್ಕೆ ಸೇರಿತ್ತು. ಪ್ರಾಚೀನ ಶಾಸನಗಳಲ್ಲಿ ಇದನ್ನು ತಿರುನಲಕುನ್ರಂ ಮತ್ತು ಶಿಖಾನಲ್ಲೂರು ಎಂದು ಸಂಬೋಧಿಸಲಾಗಿದೆ. ದೇವಾಲಯದ ಅರ್ಚಕ ಅನಿರೀಕ್ಷಿತವಾಗಿ ಅಲ್ಲಿಗೆ ಆಗಮಿಸಿದ ರಾಜನಿಗೆ ತನ್ನ ಹೆಂಡತಿಯ ತಲೆಯಲ್ಲಿದ್ದ ಪುಷ್ಪವನ್ನು ಕೊಟ್ಟಾಗ ಅದರಲ್ಲಿದ್ದ ಕೂದಲು ಎಲ್ಲಿಂದ ಬಂತೆಂದು ರಾಜ ಕೇಳಿದ. ಅರ್ಚಕ ಅದು ದೇವರ ತಲೆಯ ಕೂದಲೆಂದು ಹೇಳಿದಾಗ ಕರುಣಾಶಾಲಿಯಾದ ದೇವರು ತನ್ನ ಶಿಖೆಯಲ್ಲಿ ಕೂದಲಿರುವಂತೆ ಭಾಸವಾಗುವ ಹಾಗೆ ಮಾಡಿ ಅರ್ಚಕನ ಆಪತ್ತನ್ನು ಬಗೆಹರಿಸಿದ. ಆದ್ದರಿಂದ ಇದಕ್ಕೆ ಕುಡಿಮಿಯಾಮಲೈ (ಶಿಖೆ: ಕುಡಿಮಿ) ಎಂಬ ಹೆಸರು ಬಂತು-ಎಂದು ಪ್ರತೀತಿ. ಹಿಂದಿನ ಇತಿಹಾಸ ಕಾಲದಲ್ಲಿ ಈ ಸ್ಥಳ ಎಂದೂ ತನ್ನ ಪ್ರಾಮುಖ್ಯವನ್ನು ಕಳೆದುಕೊಂಡಿರಲಿಲ್ಲ. ಪಲ್ಲವ, ಪಾಂಡ್ಯ, ಚೋಳ ಮತ್ತು ವಿಜಯನಗರ ಸಾಮ್ರಾಜ್ಯಗಳ ಕಾಲದಲ್ಲಿ ಇದು ಒಂದು ಮುಖ್ಯಸ್ಥಳವಾಗಿತ್ತು. ಬೆಟ್ಟದ ಮೇಲೆ ಸುಬ್ರಹ್ಮಣ್ಯ ಮತ್ತು ಬುಡದಲ್ಲಿ ಶಿಖಾನಾಥ ಮತ್ತು ಅಖಿಲಾಂಡೇಶ್ವರಿ ದೇವಾಲಯಗಳಿವೆ. ಪ್ರಸಿದ್ಧವಾದ ಶಿಖಾನಾಥೇಶ್ವರ ದೇವಾಲಯಕ್ಕೆ ಈ ಪ್ರದೇಶವನ್ನಾಳಿದ ರಾಜಮನೆತನಗಳೆಲ್ಲವೂ ತಮ್ಮ ಕೊಡುಗೆಗಳನ್ನು ನೀಡಿವೆ.

ಶಿಖಾನಾಥೇಶ್ವರ ದೇವಾಲಯದ ದ್ವಾರಮಂಟಪ ಸಹಸ್ರ ಕಂಬಗಳ ಮಂಟಪವೆಂದು ಪ್ರಸಿದ್ಧವಾಗಿದೆ. ಅದು ಈಗ ಜೀರ್ಣಾವಸ್ಥೆಯಲ್ಲಿದೆ. ಈ ಮಂಟಪದ ಕಂಬಗಳಲ್ಲಿ ರಾಮಾಯಣದ ವಾನರಮುಖ್ಯವಾದ ವಾಲಿ, ಸುಗ್ರೀವ ಮತ್ತು ಹನುಮಾನ್‍ಗಳ, ವಿಷ್ಣುವಿನ ಅವತಾರಗಳಾದ ಮತ್ಸ್ಯ, ಕೂರ್ಮ, ವರಾಹ ಮತ್ತು ನೃಸಿಂಹರ, ಗಿಳಿಯ ಮೇಲೆ ಕುಳಿತು ಹಾರುತ್ತಿರುವ ರತಿಮನ್ಮಥರ ಸುಂದರವಾದ ಕೆತ್ತನೆಯ ಶಿಲ್ಪಗಳಿವೆ. ಅದರ ಸಮೀಪದ ಮತ್ತೊಂದು ದೊಡ್ಡ ಮಂಟಪದ ಕಂಬಗಳ ಮೇಲೆ ಗಣಪತಿ, ಸುಬ್ರಹ್ಮಣ್ಯ, ರಾವಣ, ಉಗ್ರನರಸಿಂಹ, ರಾಮ, ಮೋಹಿನಿ, ಶಿವ, ವೀರಭದ್ರ, ಕಾಳಿ, ನಟರಾಜ ಮತ್ತು ಗರುಡವಾಹನನಾದ ವಿಷ್ಣು ವಿಗ್ರಹಗಳನ್ನು ಸುಂದರವಾಗಿ ಕೊರೆಯಲಾಗಿದೆ. ಈ ಮಂಟಪಗಳಲ್ಲದೆ ಚೋಳರ ಕಾಲದಲ್ಲಿ ನಿರ್ಮಿತವಾದ ಮಹಾಮಂಟಪ ಮತ್ತು ಸಭಾಮಂಟಪಗಳಲ್ಲೂ ಅನೇಕ ಸುಂದರ ವಿಗ್ರಹಗಳಿವೆ.

ಮೂರು ಹಂತಗಳ ವಿಮಾನವನ್ನು ಗಾರೆ ಮತ್ತು ಇಟ್ಟಿಗೆಗಳಿಂದ ರಚಿಸಲಾಗಿದೆ. ಗರ್ಭಗೃಹ ಪಲ್ಲವರ ಕಾಲದಲ್ಲಿ ನಿರ್ಮಾಣವಾದ್ದು. ಚೋಳರ ಕಾಲದಲ್ಲಿ ಇದರ ಜೀರ್ಣೋದ್ದಾರವಾಯಿತು. ಮೂಲ ವಿಗ್ರಹಗಳನ್ನು ಎಚ್ಚರಿಕೆಯಿಂದ ಕಾಪಾಡಿಕೊಂಡು ಬರಲಾಗಿದೆ. ಅಖಿಲಾಂಡೇಶ್ವರಿ ಅಮ್ಮನ ಗರ್ಭಗೃಹವೂ ಪ್ರಾಚೀನವಾದ್ದು.

ಮುಖಮಂಟಪದ ಒಂದು ಪಾಶ್ರ್ವದಲ್ಲಿ ಒಂದು ದೊಡ್ಡ ಕೊಳವುಂಟು ಮತ್ತೊಂದು ಪಾಶ್ರ್ವದಲ್ಲಿ ಶಿವ, ಸುಂದರನಾಯಕಿ ಮತ್ತು ಗಣೇಶರ ಗುಹಾಲಯಗಳಿವೆ. ಇವು ಪಲ್ಲವರ 1ನೆಯ ಮಹೇಂದ್ರವರ್ಮನಿಂದ ನಿರ್ಮಾಣಗೊಂಡವು. ಇವುಗಳ ಪಕ್ಕದಲ್ಲಿ 63 ಜನ ಶೈವ ಮುನಿಗಳ ವಿಗ್ರಹಗಳಿವೆ.

 ಚೋಳರ ಕಾಲದಲ್ಲೂ ಈ ಗ್ರಾಮ ಪ್ರಖ್ಯಾತವಾಗಿತ್ತು. ಅವರು ಇಲ್ಲಿ ಸೈನ್ಯದ ತುಕಡಿಗಳನ್ನು ನೆಲೆಗೊಳಿಸಿದ್ದುದಾಗಿಯೂ, ಇಲ್ಲಿಯ ದೇವಾಲಾಯಗಳ ವಿಸ್ತರಣ ಕಾರ್ಯವನ್ನು ಮುಂದುವರಿಸಿದುದಾಗಿಯೂ ಶಾಸನಗಳಿಂದ ತಿಳಿದು ಬರುತ್ತದೆ. ಮಧುರೆಯ ಪಾಂಡ್ಯ ಸಂತತಿಯ ಅರಸರು ಕೂಡ ಇಲ್ಲಿಯ ದೇವಾಲಯಗಳಿಗೆ ವಿಶೇಷ ದತ್ತಿಗಳನ್ನು ಕೊಟ್ಟುದಾಗಿ ಇಲ್ಲಿ ಸಿಕ್ಕಿರುವ ಪಾಂಡ್ಯಶಾಸನಗಳಿಂದ ತಿಳಿದು ಬರುತ್ತದೆ. ವಿಜಯನಗರ ಸಾಮ್ಯಾಜ್ಯದ ಕಾಲದಲ್ಲೂ ಕುಡಿಮಿಯಾಮಲೈಗ್ರಾಮ ಉನ್ನತಸ್ಥಿತಿಯಲ್ಲಿತ್ತು. ವೀರ ಕಂಪಣ್ಣನೂ ಅನಂತರ ಗೋಪತಿಮ್ಮನೂ ಈ ಪ್ರದೇಶದ ಮಂಡಲಾಧಿಕಾರಿಗಳಾಗಿದ್ದರೆಂದೂ ಆ ಕಾಲದಲ್ಲೂ ದೇವಾಲಯದ ಭಾಗಗಳನ್ನು ವಿಸ್ತರಣೆ ಮಾಡಲಾಯಿತೆಂದೂ ಶಾಸನಗಳಿಂದ ತಿಳಿದುಬರುತ್ತದೆ. ಅನಂತರ ಆಳಿದ ಮಧುರೆಯ ನಾಯಕರೂ ಪುದುಕೋಟೆ ರಾಜಮನೆತನದವರೂ ಇಲ್ಲಿಯ ದೇವಾಲಯಗಳ ಮೇಲ್ಮೆಗಾಗಿ ದಾನದತ್ತಿಗಳನ್ನು ಕೊಟ್ಟರು.

 

(ಜೆ.ಆರ್.ಆರ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ